November 8, 2025

ಆತ್ಮವಿಶ್ವಾಸದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ: ಗೆಲುವು ಕಟ್ಟಿಟ್ಟ ಬುತ್ತಿ: ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆರ್.ಎಸ್. ನರೇಗಲ್ಲ ಅಭಿಮತ

ಗದಗ. ನರೇಗಲ್ಲ ನ.೦೬: ಕ್ರೀಡೆಯಲ್ಲಿ ಏಕಾಗ್ರತೆ, ತಂಡದ ಸಹಪಾಠಿಗಳೊಂದಿಗೆ ಸಮನ್ವಯತೆ ಇದ್ದಾಗ ಮಾತ್ರ ಜಯ ನಮ್ಮದಾಗಿಸಿಕೊಳ್ಳಲು ಸಾಧ್ಯ ಆ ನಿಟ್ಟಿನಲ್ಲಿ ತಾವೆಲ್ಲರೂ ಸಂಘನಾತ್ಮಕವಾಗಿ ತಮಿಳುನಾಡಿನ ಎರೋಡಾದಲ್ಲಿ ಜರುಗುವ ೩೫ನೇ ರಾಷ್ಟ್ರೀಯ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಭಾಗವಹಿಸಿ ರಾಜ್ಯದ ಕೀರ್ತಿಯನ್ನು ಬೆಳಗಿಸಬೇಕು ಎಂದು ರೋಣ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ ಹೇಳಿದರು.
ಅವರು ಸ್ಥಳೀಯ ಚೈತನ್ಯ ಕ್ರೀಡಾ ಸಂಸ್ಥೆಯ ನೇತೃತ್ವದಲ್ಲಿ ಅ.೨೫ ರಿಂದ ನ.೬ರವರೆಗೆ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರುಗಿದ ಕರ್ನಾಟಕ ತಂಡದ ಬಾಲಕಿಯರ ಜೂನಿಯರ್ ಅಟ್ಯಾಪಟ್ಯಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ತಂಡ ಇಲ್ಲಿಯವರೆಗೆ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದು, ತಾವುಗಳು ಅದೇ ರೀತಿ ನ.೮ರಿಂದ ೧೦ರವರೆಗೆ ಜರುಗುವ ಕ್ರೀಡೆಯಲ್ಲಿ ಜಯವನ್ನು ಗಳಿಸುವಂತಾಗಲಿ ಎಂದು ನರೇಗಲ್ಲ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಚೈತನ್ಯ ಕ್ರೀಡಾಸಂಸ್ಥೆಯ ಅಧ್ಯಕ್ಷ ನಿಂಗರಾಜ ಕೆ. ಬೇವಿನಕಟ್ಟಿ ಮಾತನಾಡಿ ಕ್ರೀಡಾಪಟುಗಳಲ್ಲಿ ಕ್ರೀಡಾಮನೋಭಾವನೆ ತುಂಬಾ ಮುಖ್ಯ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ತಾವುಗಳು ಎದುರಾಳಿ ತಂಡದ ವಿರುದ್ದ ಆಡುವಾಗ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ತಂಡದ ಎಲ್ಲ ಸದಸ್ಯರು ಸಂಘಟನಾತ್ಮಕವಾಗಿ ಆಟ ಆಡುವ ಮೂಲಕ ಗೆಲುವಿನ ನಗೆ ಬೀರಬೇಕು, ಇಲ್ಲಿ ಸತತ ೧೨ದಿನಗಳ ಕಾಲ ಜರುಗಿದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ವಿ.ಎ. ಕುಂಬಾರ, ಮಾರ್ಗದರ್ಶಕರಾದ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಆರ್.ಎಸ್. ನರೇಗಲ್ಲ , ಮುಖ್ಯ ತರಬೇತುದಾರ ಮಹಮ್ಮದ್ ರಫೀಕ್ ರೇವಡಿಗಾರ ಹಾಗೂ ತರಬೇತುದಾರ ಆನಂದ ಕೊಂಡಿಯವರು ನಿಮಗೆ ನೀಡಿದ ಮಾರ್ಗದರ್ಶನದಂತೆ ಕ್ರೀಡಾ ಪ್ರದರ್ಶನ ಮಾಡಿರಿ ಎಂದು ತಿಳಿಸಿದರು.
ಚೈತನ್ಯ ಕ್ರೀಡಾ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ಸೇವೆ ಅಲ್ಲಿಸುತ್ತಿದ್ದು ಇದರ ಅಡಿಯಲ್ಲಿ ಹಲವಾರು ಕ್ರೀಡಾಪಟುಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಕ್ರೀಡಾಪ್ರದರ್ಶನ ತೋರುವ ಮೂಲಕ ತಮ್ಮ ಶೈಕ್ಷಣಿಕವಾಗಿ ಹಾಗೂ ಉದ್ಯೋಗಾವಕಾಶ ಪಡಿದುಕೊಂಡಿದ್ದಾರೆ. ಅದರಂತೆ ತಾವುಗಳು ಅದರ ಸೌಲಭ್ಯಗಳನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಿಡಗುಂದಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರ ಮಹಮ್ಮದ್ ರಫೀಕ್ ರೇವಡಿಗಾರ, ಸಂಪನ್ಮೂಲ ವ್ಯಕ್ತಿ ಶಿಕ್ಷಕ ವಿ.ಎ. ಕುಂಬಾರ, ಆನಂದ ಕೊಂಡಿ, ಅಂಚಡಗೇರಿಯ ತರಬೇತುದಾರ ರವಿಕುಮಾರ, ಗೌರವ ಸಲಹೆಗಾರ ಉಮೇಶ ನವಲಗುಂದ, ಸಂಸ್ಥೆಯ ಕಾರ್ಯದರ್ಶಿ ಸಂತೋಷ ಯಳಮಲಿ, ರವಿ ಹೊನವಾಡ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.

error: Content is protected !!