ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಸಂಬಂಧ ಸಚಿವ ಸಂಪುಟದ ನಿರ್ಣಯದ ಅನ್ವಯ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಬಗ್ಗೆ ಸೂಕ್ತ ಶಿಫಾರಸುಗಳೊಂದಿಗೆ ಎರಡು ತಿಂಗಳ ಅವಧಿಯೊಳಗಾಗಿ ವರದಿ ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ.
ಈ ವಿಚಾರಣಾ ಆಯೋಗದ ಕಚೇರಿ, ವಾಹನ ವ್ಯವಸ್ಥೆ ಅಗತ್ಯ ಸಿಬ್ಬಂದಿ, ಗೌರವಧನ ಮತ್ತು ಇತರ ಸವಲತ್ತುಗಳನ್ನು ಕಲ್ಪಿಸುವ ಸಂಬಂಧ ಪ್ರತ್ಯೇಕವಾಗಿ ಆದೇಶ ಹೊರಡಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಪರಿಶಿಷ್ಟ ಜಾತಿ(ಎಸ್‌ಸಿ)ಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಮತ್ತು ಈ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸಲು ಅ.28ರಂದು ನಡೆದ ರಾಜ್ಯದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, ಒಳ ಮೀಸಲಾತಿ ಜಾರಿ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚಿಸಲಾಗುವುದು ಎಂದು ತಿಳಿಸಿದ್ದರು.
ಎಸ್‌ಸಿಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ನಂಬಲರ್ಹ ದಾಖಲೆಗಳು ಹಾಗೂ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದರು. ಇದೀಗ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಎಸ್‌ಸಿ ಜನಾಂಗದಲ್ಲಿ ಒಳಮೀಸಲಾತಿಯನ್ನು ಕಲ್ಪಿಸಲು 2005ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನ್ಯಾ. ಎ.ಜೆ. ಸದಾಶಿವ ಆಯೋಗವನ್ನು ರಚಿಸಲಾಗಿತ್ತು. ವಿವಿಧ ಕಾರಣಕ್ಕೆ ಆಯೋಗವು ವರದಿ ನೀಡಲು ವಿಳಂಬವಾಗಿತ್ತು. ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಉದ್ಯೋಗ ಸ್ಥಿತಿಗಳನ್ನು ಅಧ್ಯಯನ ನಡೆಸಿದ ಆಯೋಗವು ಕೊನೆಗೆ 2012ರಲ್ಲಿ ಡಿ.ವಿ. ಸದಾನಂದ ಗೌಡ ಸಿಎಂ ಆಗಿದ್ದ ಅವಧಿಯಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಕೆ ಮಾಡಿತ್ತು. ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ, ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟವು, ಎಸ್‌ಸಿ ಎಡಗೈ ಸಮುದಾಯಗಳಿಗೆ ಶೇ. 6, ಬಲಗೈ ಸಮುದಾಯಗಳಿಗೆ ಶೇ. 5.5, ಸ್ಪಶ್ಯರಿಗೆ (ಬಂಜಾರ, ಭೋವಿ, ಕೊರ್ಚಾ, ಕುರುಮಾ ಇತ್ಯಾದಿ) ಶೇ. 4.5 ಮತ್ತು ಇತರರಿಗೆ ಶೇ. 1 ರಷ್ಟು ಒಳ ಮೀಸಲಾತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಒಳ ಮೀಸಲಾತಿಯ ಬಗ್ಗೆ ನಿರ್ಧಾರ ತೆಗೆದುಕೊಂಡಿತ್ತು. ಒಳ ಮೀಸಲಾತಿ ಜಾರಿಗೆ ಆಗ್ರಹ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದೆ.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ