November 8, 2025

ಕನ್ನಡ ಸ್ವಾಭಿಮಾನ ಜಾಗೃತವಾದರೆ ಮಾತ್ರ ಕನ್ನಡ ಭಾಷೆ ಶಕ್ತಿಯುತವಾಗಿ ಉಳಿಯಲಿದೆ :ಲೇಖಕ ರಾಜಕುಮಾರ

ಕನ್ನಡ ಸ್ವಾಭಿಮಾನ ಜಾಗೃತ ವಾದರೆ ಮಾತ್ರ ಕನ್ನಡ ಭಾಷೆ ಶಕ್ತಿಯುತವಾಗಿ ಉಳಿಯಲಿದೆ:ಲೇಖಕ ರಾಜಕುಮಾರ ನೆಲಮಂಗಲ :ಕನ್ನಡಿಗರ ಸ್ವಾಭಿಮಾನ ಜಾಗೃತವಾದರೆ ಮಾತ್ರ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಶಕ್ತಿಯುತವಾಗಿ ಉಳಿಯಲು ಸಾಧ್ಯ ಎಂದು ಹಿರಿಯ ಲೇಖಕ ಕೆ.ರಾಜಕುಮಾರ್ ತಿಳಿಸಿದರು.

ನಗರದ ಗಣೇಶನ ಗುಡಿಯ ಸಿದ್ದಗಂಗಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ನಿಂದ ಹಮ್ಮಿಕೊಂಡಿದ್ದ ಕುವೆಂಪು ಪುಣ್ಯಸ್ಮರಣೆ ಹಾಗೂ ಕನ್ನಡ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದಲ್ಲಿಕರ್ನಾಟಕ ರಾಜ್ಯ ಭೌಗೋಳಿಕವಾಗಿ, ಕಲೆ, ಸಾಹಿತ್ಯ, ರಾಜಕೀಯ, ಆರ್ಥಿಕ ಸೇರಿದಂತೆ ಎಲ್ಲಾ ವಿಭಾಗದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಕನ್ನಡ ಭಾಷೆ 1500 ಸಾವಿರ ವರ್ಷಗಳ ಹಿಂದೆಯೇ ಆಡಳಿತ ಭಾಷೆಯಾಗಿರುವ ಕುರಿತು ದಾಖಲಾತಿಗಳಿದ್ದು, 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಕನ್ನಡಿಗರು ಕನ್ನಡದ ಮೇಲಿನ ಸ್ವಾಭಿಮಾನ ಮರೆತರೆ ಕನ್ನಡದ ಸಂಸ್ಕಾರ, ಸಂಸ್ಕೃತಿ ಸರ್ವನಾಶವಾಗಲಿದೆ. ಆದ್ದರಿಂದ ಸ್ವಾಭಿಮಾನ ಜಾಗೃತವಾಗಬೇಕಾಗಿದೆ ಎಂದರು.

ಅರಿಯುವ ಕೆಲಸ ಮಾಡಿ: ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಬೈರನಹಳ್ಳಿ ಪ್ರಕಾಶ್‌ ಮೂರ್ತಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವ ಜತೆ ಅರಿತುಕೊಳ್ಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಶಿಕ್ಷಣದ ಜತೆ ಕನ್ನಡದ ಶ್ರೇಷ್ಠತೆಯನ್ನು ತಿಳಿದುಕೊಂಡರೆ ಮಾತ್ರ ಕನ್ನಡ ಶಾಶ್ವತವಾಗಿ ಉಳಿಯಲು ಸಾಧ್ಯ. ಕುವೆಂಪು ಅವರ ಸೇವೆಯನ್ನು ಮರೆಯುವಂತಿಲ್ಲ. ಅವರ ಮಾರ್ಗದರ್ಶನ, ಬರಹಗಳು ನಮ್ಮ ಬದುಕಿಗೆ ಶಕ್ತಿಯಾಗಬೇಕಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್‌ನಿಂದ ಕಲಾವಿದೆ ಕಲಾವತಿ, ವಕೀಲ ಮನುಕುಮಾರ್, ಸಾಹಿತಿ ಗೋಪಿ ನಾಥ್, ಅನ್ನಪೂರ್ಣೇಶ್ವರಿ ಬಳಗ ರಂಗಸ್ವಾಮಿ, ಭೈರನಾಯಕನಹಳ್ಳಿ ಗಂಗಣ್ಣ, ಸಮಾಜ ಸೇವಕ ಬೈಲೇಗೌಡ ಸೇರಿದಂತೆ 6ಜನರಿಗೆ ಕನ್ನಡ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿದ್ದಗಂಗಾ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಶ್ರೀವಿಜಯ ದುಗ್ಗಪ್ಪ ಉಪನ್ಯಾಸಕ ಡಾ.ಗಂಗರಾಜು, ಕನ್ನಡ ಉಪನ್ಯಾಸಕಿ ಕೋಮಲ, ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಮಂಜುಳಾ ಸಿದ್ದರಾಜು, ಸಾಹಿತಿ ಚೌಡಯ್ಯ, ಕಸಾಪ ಗೌರವ ಕಾರ್ಯದರ್ಶಿ ವೀರಸಾಗರಭಾನುಪ್ರಕಾಶ್, ಪದಾಧಿಕಾರಿಗಳಾದ ಇಸ್ತೂರು ಸ್ಟುಡಿಯೊ ಬೈಲೇಗೌಡ, ಬೂದಿಹಾಳ್ ಕೃಷ್ಣಪ್ಪ, ರಂಗನಾಥ್ ಮತ್ತಿತರರಿದ್ದರು.

error: Content is protected !!